ಮಧ್ಯವಯಸ್ಕನೊಬ್ಬ ನಡುಮನೆಯಲ್ಲಿ ಒಬ್ಬನೇ ಕೂತು ಜೋರಾಗಿ ಅಳುತ್ತಿದ್ದ.
ರಸ್ತೆಯಲ್ಲಿ ಹೋಗುತ್ತಿದ್ದ ಸಾಧುವೊಬ್ಬ ಆ ಅಳುವನ್ನು ಕೇಳಿ ಒಳಗೆ ಬಂದ. ಆ ವ್ಯಕ್ತಿ ಆತನ ಆಗಮನವನ್ನೂ ಗಮನಿಸದ ಪರಿಸ್ಥಿತಿಯಲ್ಲಿ ಇದ್ದುದನಾದ್ದರಿಂದ, ಒಂದೆರಡು ನಿಮಿಷಗಳ ಕಾಲ ಕಾಯ್ದ ಸಾಧು, ತಾನೇ ಪ್ರಶ್ನಿಸಿದ:
"ಏನಪ್ಪಾ ತುಂಬಾ ಸಂತೋಷದಿಂದ ಇರುವಂತೆ ಕಾಣುತ್ತಿದೆ?"
ಆ ವ್ಯಕ್ತಿ ಅಳುತ್ತಲೇ, "ಸಂತೋಷವಾ? ನಾನು ಅಳುತ್ತಿರುವುದು ನಿಮಗೆ ಕಾಣುತ್ತಿಲ್ಲವೆ?"
"ಅಷ್ಟೊಂದು ತಲ್ಲೀನನಾಗಿ ಅಳುತ್ತಿರುವುದನ್ನು ನೋಡಿ, ಅಳುವಿನಿಂದಲೇ ಆನಂದ ಹೊಂದುತ್ತಿರುವೆಯೇನೋ ಎಂದು ಭಾವಿಸಿದೆ. ಒಂದು ವೇಳೆ ಅಳುವಿನಲ್ಲಿ ನಿನಗೆ ಸಂತೋಷ ಸಿಗದಿದ್ದರೆ, ಮತ್ಯಾಕೆ ಅಳುತ್ತಿದ್ದೀ?"
ಆಗ ವ್ಯಕ್ತಿಯ ಅಳು ಕೋಪವಾಗಿ ಬದಲಾಯಿತು. "ಇದ್ಯಾವ ವಿತಂಡವಾದ ಸಾಧು ಮಹಾರಾಜ್. ತೀರಾ ಹತ್ತಿರದವರು ಇಲ್ಲವಾದರೆ ಮನುಷ್ಯರು ಅಳುವುದು ಸಹಜ ತಾನೆ?"
"ಹೌದಾ? ಹತ್ತಿರದವರು ತೀರಿಕೊಂಡರೆ ನೊಂದುಕೊಳ್ಳುವುದು ಮನುಷ್ಯನ ಸಹಜಧರ್ಮ ನಿಜ."
"ಅದನ್ನೇ ನಾನು ಅಳುವಿನ ಮೂಲಕ ವ್ಯಕ್ತಪಡಿಸುತ್ತಿದ್ದೇನೆ."
ಸಾಧು ಮನೆಯ ಆಚೀಚೆ ನೋಡಿ, "ಇಲ್ಲಿ ಯಾರೂ ಇಲ್ಲವಲ್ಲ. ಯಾರಿಗೆ ನಿನ್ನ ದುಃಖವನ್ನು ವ್ಯಕ್ತಪಡಿಸುತ್ತಿದ್ದೀ?"
ಅಳುತ್ತಿದ್ದ ಮಧ್ಯವಯಸ್ಕ ಸುಸ್ತಾದ. "ಸ್ವಾಮೀ, ವಾದದಿಂದ ನನ್ನನ್ನು ಗೊಂದಲಕ್ಕೆ ಈಡು ಮಾಡುತ್ತಿದ್ದೀರಿ. ಅಳುವ ಮೂಲಕ ನನ್ನ ದುಃಖ ಹೊರಹಾಕಿ ಸಮಾಧಾನಿತನಾಗುವುದು ನನ್ನ ಉದ್ದೇಶ."
"ನಾನು ಮನೆಯ ಒಳ ಬಂದಾಗ ನೀನು ಹೇಳಿದ ಮಾತು ಇದೇ ತಾನೆ? ಅಳುವಿನ ಮೂಲಕ ನೀನು ಸಮಾಧಾನ ಹೊಂದುತ್ತಿದ್ದೀಯಾ? ಎಂದೇ ನಾನು ಕೇಳಿದ್ದು. ಆದರೆ, ನಿನ್ನನ್ನು ಸಮಾಧಾನಪಡಿಸಲು ಕೂಡಾ ಇಲ್ಲಿ ಯಾರೂ ಇದ್ದಂತಿಲ್ಲವಲ್ಲ?" ಸಹಾನುಭೂತಿಯಿಂದ ಕೇಳಿದ.
"ಹೌದು, ಸಮಾಧಾನಪಡಿಸಲು ಯಾರೂ ಇಲ್ಲ. ಕಳೆದ ವಾರವಷ್ಟೇ ನನ್ನ ಆಸ್ತಿ ಎಲ್ಲವನ್ನೂ ಕಳೆದುಕೊಂಡು ದಿವಾಳಿಯಾದೆ. ನನ್ನ ಹೆಂಡತಿ ಕೂಡ ಯಾರೊಂದಿಗೋ ಎರಡು ದಿನಗಳ ಹಿಂದೆ ಓಡಿಹೋದಳು. ಇವತ್ತು ನನ್ನ ಮಗ ದೂರ ದೇಶದಲ್ಲಿ, ಅಲ್ಲಿಯದೇ ಹೆಣ್ಣಿನೊಂದಿಗೆ ಮದುವೆಯಾದ. ಇಂಥ ಸಂದರ್ಭಗಳಲ್ಲಿ ಜೊತೆಗಿದ್ದು ಸಮಾಧಾನ ಹೇಳುತ್ತಿದ್ದ ನಮ್ಮ ಹತ್ತಿರದ ಗೆಳೆಯ ಕೂಡ ಈಗ ಕೆಲವೇ ಗಂಟೆಗಳ ಹಿಂದೆ ತೀರಿಕೊಂಡ. ಹೀಗಾಗಿ, ದುಃಖ ತಡೆಯಲಾರದೇ ಅಳುತ್ತಿದ್ದೇನೆ."
"ಅಂದರೆ, ಸಮಾಧಾನಪಡಿಸುವವರು ಬೇಕೆಂದು ತಾನೆ ನಿನ್ನ ಉದ್ದೇಶ?"
"ಹೌದು ಮತ್ತೆ. ನೋವಿನಲ್ಲಿದ್ದಾಗ ಸಮಾಧಾನ ಹೇಳುವ ಮಿತ್ರರು ಬೇಕು ತಾನೆ?"
ಯೋಗಿ ಯೋಚಿಸುತ್ತಾ ಹೇಳಿದ: "ನೀನು ಹೇಳುತ್ತಿರುವುದೇ ನನಗೆ ಅರ್ಥವಾಗುತ್ತಿಲ್ಲ. ಕಷ್ಟ ಬಂದಾಗ ಅಳೋದು ಸಹಜ ಅಂದೆ. ಅದರಿಂದ ಸಮಾಧಾನವಾಗುತ್ತೆ ಅಂದೆ. ಈಗ ನೋಡಿದರೆ, ದುಃಖ ಹೋಗಲಾಡಿಸಲು ಸಮಾಧಾನ ಬೇಕೆನ್ನುತ್ತೀ. ಇಷ್ಟಕ್ಕೂ ನಿನಗೆ ಬೇಕಾಗಿದ್ದೇನು? ನೋವಾ? ದುಃಖವಾ? ಸಮಾಧಾನವಾ?"
"ನೀವು ಬಿಡಿ, ಎಲ್ಲಾ ತೊರೆದ ಸನ್ಯಾಸಿಗಳು. ನಾನೋ ಸಾಮಾನ್ಯ ಮನುಷ್ಯ. ಕಷ್ಟ, ದುಃಖ, ಸಮಾಧಾನ ಇವೆಲ್ಲ ಮಾನವ ಸಹಜ."
"ನಿನ್ನನ್ನು ಸಮಾಧಾನಪಡಿಸಲು ಯಾರೂ ಇಲ್ಲವೆಂದಾದಾಗ, ಎಷ್ಟು ಹೊತ್ತು ದುಃಖಿಸಿದರೆ ನಿನಗೆ ಸಮಾಧಾನವಾಗುತ್ತದೆ? ಒಂದು ವಾರವೆ? ಒಂದು ತಿಂಗಳೆ?"
"ಇದೆಂಥ ಪ್ರಶ್ನೆ ಸ್ವಾಮಿ? ನನಗೆ ಅರ್ಥವಾಗುತ್ತಿಲ್ಲ."
"ಹೋಗಲಿ, ಒಂದು ತಿಂಗಳು ದುಃಖಿಸುತ್ತೀ ಎಂದುಕೊಳ್ಳೋಣ. ಆನಂತರವಾದರೂ ನಿನಗೆ ಸಮಾಧಾನವಾಗುತ್ತದಾ?"
"ದುಃಖವನ್ನು ಕಾಲವೇ ವಾಸಿ ಮಾಡುತ್ತಾರೆ ಅಂತಾರೆ ಬಲ್ಲವರು."
"ಸರಿ, ಎರಡು ತಿಂಗಳು ದುಃಖಿಸುತ್ತೀ ಎಂದುಕೊಳ್ಳೋಣ. ಅಲ್ಲಿಯವರೆಗೆ ಊಟ-ನಿದ್ದೆ ಬಿಟ್ಟು ಅಳುತ್ತಾ ಕೂಡುತ್ತೀಯಾ?"
"ಏನು? ಎರಡು ತಿಂಗಳ ಕಾಲ ಊಟ-ನಿದ್ದೆ ಬಿಟ್ಟು ಅಳೋದಾ? ಜನ ಏನೆಂದುಕೊಳ್ಳುತ್ತಾರೆ? ನೀವು ತಮಾಷೆ ಮಾಡುತ್ತಿಲ್ಲ ತಾನೆ?"
"ಅದು ಬಿಡು, ನಿನಗೆ ಏನು ಇಷ್ಟ? ಸಂಕೋಚವಿಲ್ಲದೆ ಹೇಳು. ನಿನ್ನ ಮನಸ್ಸು ಸರಿಯಾಗಿಲ್ಲದಿರುವಾಗ ಏನು ಮಾಡುತ್ತಿ? ಸುಳ್ಳು ಹೇಳಬಾರದು."
ಆತ ಸಂಕೋಚದಿಂದ ಹೇಳಿದ: "ನನಗೆ ಸಿನಿಮಾ ನೋಡೋದು ಎಂದರೆ ತುಂಬ ಇಷ್ಟ."
"ಮತ್ಯಾಕೆ ಅಳುತ್ತಿದ್ದೀ? ಟಿವಿ ಆನ್ ಮಾಡಿಕೊಂಡು ಸಿನಿಮಾ ನೋಡು, ಆಗ ದುಃಖ ಶಮನವಾಗೇ ಆಗುತ್ತದೆ."
"ಅಯ್ಯೋ ಸ್ವಾಮೀಜಿ, ಇಷ್ಟೆಲ್ಲಾ ತೊಂದರೆಗಳು ಕಣ್ಮುಂದೆ ಇರುವಾಗ, ಈಗ ತಾನೇ ನನ್ನ ಆತ್ಮೀಯ ಗೆಳೆಯ ತೀರಿಕೊಂಡಿರುವಾಗ, ನಾನು ಸಿನಿಮಾ ನೋಡುತ್ತ ಕೂತರೆ ಜನ ಏನೆಂದುಕೊಳ್ಳುತ್ತಾರೆ?"
"ನನಗೆ ಅರ್ಥವಾಗದೇ ಇರೋದೇ ಈ ಅಂಶ. ಅತ್ತರೆ ಸಮಾಧಾನವಾಗುತ್ತದೆ ಅಂತೀಯಾ. ಆದರೆ, ಊಟ-ನಿದ್ದೆ ಬಿಟ್ಟು ಅಳುತ್ತ ಕೂತರೆ ಜನ ಏನೆಂದುಕೊಳ್ಳುತ್ತಾರೆ ಎಂದು ಪ್ರಶ್ನೆ ಹಾಕ್ತೀಯಾ? ನೀನು ಅಳುವುದು ಯಾರಿಗೋಸ್ಕರ? ಜನರ ಸಲುವಾಗಿಯಾ? ಅಥವಾ ನಿನಗೋಸ್ಕರವಾ? ನೀನು ಎಷ್ಟು ಹೊತ್ತು ಅತ್ತರೆ ಜನ ನಿನ್ನನ್ನು ಒಳ್ಳೆಯವನೆಂದು ಗುರುತಿಸುತ್ತಾರೆ?"
"ನೀವು ವಾದ ಮಾಡುತ್ತಿದ್ದೀರಿ ಸ್ವಾಮೀಜಿ. ದುಃಖವಾದಾಗ ಅಳೋದು ಮನುಷ್ಯನ ಸಹಜ ಗುಣ. ಸ್ವಲ್ಪ ಹೊತ್ತಿಗೆ ದುಃಖ ತನಗೆ ತಾನೇ ಕಡಿಮೆಯಾಗುತ್ತದೆ. ಮನಸ್ಸು ಶಾಂತವಾಗುತ್ತದೆ. ಅದಕ್ಕೇ ಅಳೋದು. ನಿಮಗೆ ಅರ್ಥವಾಯಿತು ಅಂದುಕೊಳ್ತೀನಿ", ಆತ ವ್ಯಂಗ್ಯವಾಗಿ ಹೇಳಿದ.
"ನಾನೂ ಇದನ್ನೇ ಹೇಳಲು ಹೊರಟಿದ್ದು. ನೋವು ಕಡಿಮೆ ಮಾಡಿಕೊಳ್ಳಲು ಸಿನಿಮಾ ನೋಡುವುದು ಎಷ್ಟು ನಿರರ್ಥಕವೋ, ಅಳುತ್ತಾ ಕೂಡುವುದೂ ಅಷ್ಟೇ ನಿರರ್ಥಕ. ನೀನು ಗೆಳೆಯನ ಸಾವಿಗಾಗಿ ಅಳುತ್ತಿದ್ದರೆ, ಅದರಿಂದ ಏನೂ ಉಪಯೋಗ ಇಲ್ಲ. ಒಂದಲ್ಲ ಒಂದಿನ ನೀನೂ ಅದೇ ದಾರಿಯಲ್ಲಿ ಹೋಗಬೇಕಾಗುತ್ತದೆ. ಆದರೆ, ನಿನ್ನ ದುಃಖದಿಂದ ನಿನ್ನ ಗೆಳೆಯನಿಗಾಗಲಿ, ಅವನ ಮೇಲೆ ಅವಲಂಬಿತರಾದವರಿಗಾಗಲಿ ಏನೂ ಪ್ರಯೋಜನವಿಲ್ಲ. ನಿನಗೆ ನಿಜಕ್ಕೂ ದುಃಖವಾಗಿದ್ದರೆ, ಗೆಳೆಯನ ಸಾವಿನಿಂದ ತೊಂದರೆಗೊಳಗಾದವರಿಗೆ ಸಹಾಯ ಮಾಡು. ನೀನು ಒಂಟಿಯಾಗಿದ್ದಾಗೆಲ್ಲ ಅವನನ್ನು ನೆನಪಿಸಿಕೋ. ಅದು ನಿಜವಾದ ಪ್ರೇಮ. ಆತ್ಮೀಯರನ್ನು ಪ್ರೀತಿಸು, ಆದರೆ, ದುಃಖಿಸಬೇಡ. ಇದನ್ನೆಲ್ಲ ನೋಡಿದರೆ, ನೀನು ತಾಳಲಾರದಷ್ಟು ಹಿಂಸೆ ಕೊಟ್ಟಿದ್ದರಿಂದಲೇ ನಿನ್ನ ಹೆಂಡತಿ ಓಡಿಹೋದಳೆಂಬುದು ಅರ್ಥವಾಗುತ್ತದೆ."
"ಇಲ್ಲ ಸ್ವಾಮಿ, ನಾನು ಅವಳನ್ನು ತುಂಬ ಚೆನ್ನಾಗಿಯೇ ನೋಡಿಕೊಂಡಿದ್ದೆ. ಆದರೆ, ನನ್ನ ಆಸ್ತಿ ಎಲ್ಲಾ ಹೋಯಿತೆಂದು ಅವಳು ಯಾರೊಂದಿಗೋ ಓಡಿ ಹೋದಳು, ಅಷ್ಟೇ."
"ಹಾಗಾದರೆ, ಅದಕ್ಯಾಕೆ ದುಃಖ ಪಡಬೇಕು. ಅಂಥವಳು ಇರುವುದಕ್ಕಿಂತ ಓಡಿಹೋಗಿದ್ದೇ ಒಳ್ಳೆಯದೆಂದು ನಾಲ್ಕು ಜನರನ್ನು ಕರೆದು ಪಾರ್ಟಿ ಕೊಟ್ಟು ಸಂತೋಷ ಪ್ರಕಟಿಸಬಹುದಲ್ವೆ?"
"ಇದೊಳ್ಳೆ ಕತೆಯಾಯ್ತು. ಸದ್ಯ, ಹೆಂಡತಿ ಓಡಿಹೋದಳೆಂದು ಡಂಗೂರ ಸಾರು ಎಂದು ಹೇಳಲಿಲ್ವಲ್ಲ ನೀವು"
"ಮತ್ತೇನಯ್ಯಾ? ಜನ ಏನೆಂದುಕೊಳ್ಳುತ್ತಾರೋ ಎಂದು ದುಃಖಿಸುವುದು ಅತ್ಯಂತ ಹೇಯವಾದದ್ದು. ಏಕೆಂದರೆ, ದುಃಖ ಯಾವಾಗಲೂ ವೈಯಕ್ತಿಕ. ಸುಖ ಎಂಬುದು ಸಾರ್ವತ್ರಿಕ. ನಿನಗಾಗಿ ಬದುಕುತ್ತೀಯೋ ಜನರಿಗಾಗಿ ಬದುಕುತ್ತೀಯೋ? ನೀನು ಅಷ್ಟೊಂದು ಹೆದರುವ, ಅವರಿಗಾಗಿ ಅಷ್ಟೊಂದು ಅಳುಕಿ ಬದುಕುವ ನಿನ್ನ ಕಷ್ಟದಲ್ಲಿ ಆ ಜನ ನೆರವಾಗಿದ್ದಾರಾ?"
"ಈಗ ನನ್ನನ್ನೇನು ಮಾಡು ಅಂತೀರಿ ತಾವು?"
"ಮೊದಲು ಅಳುವುದನ್ನು ನಿಲ್ಲಿಸು. ಕಳೆದುಹೋದ ಆಸ್ತಿಯನ್ನು ಮತ್ತೆ ಸಂಪಾದಿಸಲು ಪ್ರಯತ್ನ ಶುರು ಮಾಡು. ಸತ್ತುಹೋದ ಮಿತ್ರನ ಅವಲಂಬಿತರಿಗೆ ಸಾಧ್ಯವಾದಷ್ಟೂ ನೆರವಾಗು. ಮತ್ತೆ ಮಗನೊಡನೆ ಒಳ್ಳೆಯ ಸಂಬಂಧ ಇರಿಸಿಕೋ. ಆಗ ನಿನಗೆ ಅಳಲು ಕಾರಣಗಳೇ ಇರುವುದಿಲ್ಲ. ಇದೇ ಬದುಕುವ ದಾರಿ" ಎಂದ ಸಾಧು.
(ಮೂಲ: ಯಂಡಮೂರಿ ವೀರೇಂದ್ರನಾಥ್)
ಪುನರ್ ನಿರೂಪಣೆ: ಚಾಮರಾಜ ಸವಡಿ
ಸರಿಯಾಗಿ ಬದುಕುವ ದಾರಿಯ ಬಗ್ಗೆ ತು೦ಬಾ ಒಳ್ಳೆಯ ಅ೦ಶಗಳನ್ನು ತಿಳಿಸಿದ್ದೀರಿ..
ReplyDeleteವ೦ದನೆಗಳು.
This comment has been removed by the author.
ReplyDeleteಮೊನ್ನೆ ಏನು ಆಯಿತು ಗೊತ್ತಾ ? ನಮ್ಮ ನಂದಕುಮಾರ್ ನ 14 ನೇ ಏಜ್ ನ ಒಬ್ಬಳೆ ಮಗಳು ಪ್ರೀಯಾ, ಸ್ಕೂಲಿಗೆ ಹೋಗಲು ರೆಡಿಯಾಗಿದ್ದವಳು, ತಾಯಿ ಸ್ನಾನಕ್ಕೆ ಹೋದಾಗ ಅದೇಕೋ ಮನೆಯಲ್ಲೆ ನೇಣಿಗೆ ಶರಣಾಗಿ ಬಿಟ್ಟದ್ದಳು. ಮನೆ ಬೆಳಗಬೇಕಾದ ಮುದ್ಡು ಮಗಳು. ಬಾರದ ಲೋಕಕ್ಕೆ ಹೊರಟು ಹೋದಳು. ನನಗೂ ದುಃಖ ತಡೆಯಲಾಗಲಿಲ್ಲ. ಒಬ್ಬನೆ ತುಂಬಾ ಅತ್ತೆ. ಯಾಕಂದ್ರೆ 4 ತಿಂಗಳ ಹಸಿಗೂಸಾಗಿದ್ದನಿಂದಲೇ ನಾನು ಎತ್ತಿ ಆಡಿಸಿದ್ದ ಕಂದಮ್ಮ ಅದು.
ReplyDeleteಇಂದು ಆ ಮುಗ್ಡ ಮಗುವಿನ 11 ನೇ ದಿನದ ಕ್ರಿಯಾದಿ ಕಾರ್ಯಕ್ರಮವಿತ್ತು.
ಇಂದೂ ಸೇರಿದಂತೆ ವಾರದ್ಪೊಳಗೆ 3 ಬಾರಿ ಅವನ ಮನೆಗೆ ಹೋದೆ.ನಂದಾ ಮತ್ತು ಅವನ ದರ್ಮಪತ್ನಿ ಮಂಜುಳ ಇನ್ನು ದುಃಖದಲ್ಲೆ ಇದ್ದರು. ಸಾಕಶ್ಟು ಸಮಾದಾನ ಮಾಡಿದೆ. ನಗಿಸುವ ಯತ್ನ ಮಾಡಿದೆ... ವಿದಿಗೆ ಯಾರನ್ನು ಬಿಟ್ಟಿಲ್ಲ ಎಂದೆ.
ಕುರಾನ್ ಹೇಳುತ್ತದೆ. ಸಾವನ್ನು ಪ್ರತಿ ಸೆಕೆಂಡ್ ನಿರೀಕ್ಕ್ಸೆ ಮಾಡಬೇಕಂತೆ. ಸಾವಿಗೆ ಸಂಕಟಪಡಬಾರದಂತೆ. ಏಕೆಂದರೆ ಹುಟ್ಟು - ಸಾವು ದೇವನ ಇಚ್ಚೆ. ನಾವೆಲ್ಲ ದೇವರ ಸರುಸ್ಟಿ. ಅದೇನೆ ಇರಲಿ, ಎಲ್ಲವೂ ವಿದಿಯ ಲೀಲೆ.. ಮೇಲಿನ್ ಕತೆ ಓದಿ ಎಲ್ಲಾ ನೆನಪಾಯಿತು... ಮನಸು ಭಾರವಾದರೂ.. ಸಾವಿಲ್ಲದ ಮನೆಯಲ್ಲಿ ಸಾಸಿವೆ ತಾ ಎಂಬ ಬುದ್ದನ ಮಾತು ಮನಸ್ಸನ್ನು ಕೊಂಚ ಹಗುರವನ್ನಾಗಿಸಿತು...
ಮತ್ತು ಮೇಲಿನ ಕತೆಯ ಸಾರ ಮನಸ್ಸ್ದನ್ನು ಕೊಂಚ ಹಗುರವನ್ನಾಗಿಸಿತು...
ReplyDeleteನಂದಕುಮಾರ ಸಮಯ ಟಿವಿಯ ನನ್ನ ಸಹೋದ್ಯೋಗಿ ಮಿತ್ರ
ReplyDelete