ವ್ಯಕ್ತಿತ್ವ ವಿಕಸನ
ಮನಸುಗಳ ಅರಳಿಸುತ್ತ
Monday, January 2, 2012
ಸಂತೆ ಕರಗಿದ ಮೇಲೆ ಸಂತನ ಆಗಮನ
ವರ್ಷದ ಕೊನೆಯ ದಿನ ಏನು ಮಾಡಿದಿರಿ?
ಭರ್ಜರಿ ಪಾರ್ಟಿ ಮಾಡಿದ್ದಾದರೆ, ಅದನ್ನು ಪಕ್ಕಕ್ಕಿಡಿ. ಎಸ್ಸೆಮ್ಮೆಸ್‌ಗಳನ್ನು ಕಳಿಸಿದ್ದು, ಫೋನ್ ಮಾಡಿ ಶುಭಾಶಯ ಕೋರಿದ್ದು, ಕೇಕ್ ಕತ್ತರಿಸಿದ್ದು, ಮೇಲ್ ಹಾಕಿದ್ದು, ಹೂಗುಚ್ಛಗಳನ್ನು ಕೊಟ್ಟಿದ್ದು, ದೇವಸ್ಥಾನದಲ್ಲಿ ಪೂಜೆ ಮಾಡಿಸಿದ್ದು- ಎಲ್ಲವನ್ನೂ ಆ ಕಡೆ ಸರಿಸಿ.
ನಾನು ಕೇಳುತ್ತಿರುವುದು- ನೀವು ಒಬ್ಬರೇ ಕೂತು ಏನು ಮಾಡಿದಿರಿ ಅಂತ.
ಒಂದು ವರ್ಷ ಕಳೆದು ಮತ್ತೊಂದು ವರ್ಷ ಹೊಸ್ತಿಲಲ್ಲಿರುವಾಗ, ಏನು ಮಾಡಿದಿರಿ ಎಂಬುದನ್ನು ಒಮ್ಮೆ ಯೋಚಿಸಿ. ಹೊಸ ವರ್ಷ ತಂತಾನೆ ಬಂದಿತು. ಅದಕ್ಯಾಕೆ ಅಷ್ಟೊಂದು ಸಂಭ್ರಮಪಟ್ಟಿರಿ? ನೀವು ಸಡಗರ ಪಡದಿದ್ದರೂ ಅದು ಬಂದೇ ಬರುತ್ತಿತ್ತು. ನೀವು ಅಬ್ಬರದ ಪಾರ್ಟಿ ಮಾಡಿರದಿದ್ದರೂ ಹೊಸ ವರ್ಷದ ಆಗಮನಕ್ಕೆ ಯಾವುದೇ ಅಡೆತಡೆಗಳು ಇರುತ್ತಿದ್ದಿಲ್ಲ. ನಾವು ಏನೇ ಮಾಡಿದರೂ, ಮಾಡದಿದ್ದರೂ ಗಡಿಯಾರದ ಮುಳ್ಳು, ಡಿಜಿಟಲ್ ಅಂಕೆಗಳು ಹಾಗೂ ಕ್ಯಾಲೆಂಡರ್ ಬದಲಾಗುತ್ತಲೇ ಹೋಗುತ್ತವೆ.
ನಮಗೆ ನಾವು ಏನು ಮಾಡಿಕೊಂಡೆವು? ಏನನ್ನು ಅಂದುಕೊಂಡೆವು. ಒಂದು ವರ್ಷದ ಹಿಂದೆಯೂ ಇದೇ ರೀತಿ ಏನೇನೋ ಅಂದುಕೊಂಡಿದ್ದೆವು. ಅವುಗಳ ಪೈಕಿ ಎಷ್ಟನ್ನು ಮಾಡಿದೆವು? ಎಷ್ಟೊಂದು ಹಾಗೇ ಉಳಿಯಿತು? ನಾವು ಮಾಡಿದ, ಮಾಡದೇ ಉಳಿದ ಲೆಕ್ಕಾಚಾರ ಏನಾದರೂ ಇದೆಯಾ?
ಹೊಸ ವರ್ಷದ ಭೀಷ್ಮ ಪ್ರತಿಜ್ಞೆಗಳನ್ನು ನಾನಿಲ್ಲಿ ಪ್ರಸ್ತಾಪಿಸುತ್ತಿಲ್ಲ. ಅಂಥ ಪ್ರತಿಜ್ಞೆಗಳನ್ನು ಈಡೇರಿಸುವುದು ಅಷ್ಟು ಸುಲಭವೂ ಅಲ್ಲ. ಆದರೆ, ಒಂದೆರಡು ವಿಷಯಗಳನ್ನಾದರೂ ನಾನು ಮಾಡಬೇಕಿತ್ತು ಅಥವಾ ಮಾಡಬಾರದಿತ್ತು ಅಂತ ನಾವೆಲ್ಲ ಅಂದುಕೊಳ್ಳುತ್ತೇವಲ್ಲ? ಆ ವಿಷಯಗಳ ಬಗ್ಗೆ ಯೋಚಿಸಿದಿರಾ?
ಪ್ರತಿ ವರ್ಷ ಇಂಥ ಒಂದೆರಡಾದರೂ ಅನಿಸಿಕೆಗಳು ನಮ್ಮಲ್ಲಿ ಮೂಡಿರುತ್ತವೆ. ಕಳೆದ ವರ್ಷಕ್ಕಿಂತ ಈ ವರ್ಷ ಭಿನ್ನವಾಗಿರುವಂತೆ ಬದುಕಬೇಕು. ಈ ವರ್ಷ ಹೊಸದೇನನ್ನಾದರೂ ಕಲಿಯಬೇಕು, ಕಾಡುವ ಹಳೆಯ ಚಟವನ್ನು ಬಿಡಬೇಕು. ನೆನಪನ್ನು ಕಳಚಿಕೊಳ್ಳಬೇಕು. ಹಿಂದಿಗಿಂತ ನಾನು ಈ ವರ್ಷ ಉತ್ತಮ ವ್ಯಕ್ತಿಯಾಗಬೇಕು ಎಂದು ಅಂದುಕೊಂಡಿರುತ್ತೇವೆ.
ಅಂಥ ಅನಿಸಿಕೆಗಳ ಕುರಿತು ಒಂದು ಸಲವಾದರೂ ಯೋಚಿಸಿದಿರಾ?
ನಮ್ಮ ನಿಯಂತ್ರಣದಲ್ಲಿಲ್ಲದ ಕಾಲದ ಬಗ್ಗೆ, ಕ್ಯಾಲೆಂಡರ್ ಬಗ್ಗೆ ಯೋಚಿಸುವುದು ಬೇಡ. ಆದರೆ, ನಮ್ಮ ಮಿತಿಯೊಳಗೇ ಎಷ್ಟೊಂದು ಸಾಧ್ಯತೆಗಳಿವೆ. ದಿನಾ ವ್ಯಾಯಾಮ, ಚಟದ ಪ್ರಮಾಣ ಸ್ವಲ್ಪ ಕಡಿಮೆ ಮಾಡುವುದು, ವಿಫಲ ಪ್ರೇಮಕ್ಕೆ ಎಳ್ಳುನೀರು ಬಿಟ್ಟು ಮತ್ತೆ ಜೀವಂತಿಕೆ ಗಳಿಸುವುದು, ಚೆನ್ನಾಗಿ ಓದುವುದು, ಬರೆಯುವುದು, ಹಣ ಗಳಿಸುವುದು, ಉದ್ಯಮ ಬೆಳೆಸುವುದು, ಒಂದು ಒಳ್ಳೆಯ ಗೆಳೆತನ- ಹೀಗೆ ಎಷ್ಟೊಂದು ವಿಷಯಗಳಿರುತ್ತವೆ. ಇವನ್ನು ಮಾಡಬೇಕೆಂದು ವರ್ಷಪೂರ್ತಿ ಅಂದುಕೊಂಡಿರುತ್ತೇವೆ ಕೂಡಾ.
ಇಂಥ ವಿಷಯಗಳನ್ನು ಯೋಚಿಸಿದಿರಾ?
ಪರವಾಗಿಲ್ಲ. ನಿಮ್ಮ ಹೊಸ ವರ್ಷದ ಪಾರ್ಟಿ ಎಷ್ಟೇ ಜೋರಾಗಿರಲಿ, ಅದು ಒಂದು ದಿನದ ಸಂಭ್ರಮ ಮಾತ್ರ. ಸರಿಯಾಗಿ ನೋಡಿದರೆ, ಅರ್ಧ ರಾತ್ರಿಯ ಸಂಭ್ರಮ ಮಾತ್ರ. ಗಡಿಯಾರ ೧೨ಕ್ಕೆ ಬರುತ್ತಲೇ ಹಾಕಿದ ಕೇಕೆ, ಪಟ್ಟ ಸಡಗರ, ಉಕ್ಕಿದ ಮದ್ಯ, ಬಿಕ್ಕಿದ ನೆನಪು- ಎಲ್ಲವೂ ಮತ್ತೆ ಗಡಿಯಾರ ಮರುದಿನ ೧೨ಕ್ಕೆ ಬರುವ ಹೊತ್ತಿಗೆ ಮರೆಯಾಗಿರುತ್ತವೆ. ಹೊಸ ವರ್ಷವೊಂದು ಅದ್ಯಾವ ಸಡಗರವೂ ಇಲ್ಲದೇ ನಮ್ಮೆದುರು ಬಂದು ನಿಂತಿರುತ್ತದೆ.
ಪರವಾಗಿಲ್ಲ. ಈಗಲೂ ಕಾಲ ಮಿಂಚಿಲ್ಲ. ಇವತ್ತು ವರ್ಷದ ಮೊದಲ ದಿನ. ನಿನ್ನೆಯವರೆಗೆ ಏನೇನಾಗಿತ್ತೋ ಅದನ್ನೆಲ್ಲ ಪಕ್ಕಕ್ಕಿಡಿ. ಸ್ವಸ್ಥ ಮನಸ್ಸಿನಿಂದ ಕೂತುಕೊಳ್ಳಿ. ಮಾಡಬೇಕೆಂದು ಅಂದುಕೊಂಡ ವಿಷಯಗಳನ್ನು ಮನಸ್ಸಿನ ಮುಂದೆ ತಂದುಕೊಳ್ಳಿ. ಈ ವರ್ಷದ ೩೬೫ ದಿನಗಳು ನಿಮ್ಮ ಮುಂದಿವೆ. ಪೂರ್ತಿ ೧೨ ತಿಂಗಳುಗಳು ನಿಮ್ಮ ಪಾಲಿಗಿವೆ. ಈ ೫೨ ವಾರಗಳಲ್ಲಿ ನೀವು ಏನೆಲ್ಲ ಮಾಡಬಹುದು ಎಂಬುದನ್ನು ಒಮ್ಮೆ ಯೋಚಿಸಿ.
ಏನೂ ಇಲ್ಲದೆ ಬೆತ್ತಲೆಯಾಗಿ ಜಗತ್ತಿಗೆ ಬಂದವರು ನೀವು. ಕಣ್ತೆರೆಯಲೂ ಆಗದ ಸ್ಥಿತಿಯಲ್ಲಿದ್ದ ನೀವು ಈಗ ಇದನ್ನೆಲ್ಲ ಓದಿ ಅರ್ಥ ಮಾಡಿಕೊಳ್ಳುವಷ್ಟು ದೊಡ್ಡವರಾಗಿದ್ದೀರಿ. ಜಗತ್ತಿನ ಎಷ್ಟೋ ಜನರ ಪಾಲಿಗೆ ಇಲ್ಲದ, ಇದ್ದರೂ ಸರಿಯಾಗಿರದ ಅಂಗಾಂಗಗಳು, ಅವಕಾಶಗಳು, ಅನುಕೂಲಗಳು ನಿಮಗಿವೆ. ಇವನ್ನೆಲ್ಲ ಬಳಸಿಕೊಂಡು, ನಿಮ್ಮೆದುರು ಸಮೃದ್ಧವಾಗಿರುವ ೩೬೫ ದಿನಗಳಲ್ಲಿ ಏನೇನೆಲ್ಲ ಮಾಡಬಹುದು ಎಂಬುದನ್ನು ಯೋಚಿಸಿ.
ನೀವು ಇನ್ನಷ್ಟು ಉತ್ತಮವಾಗಬಹುದು, ಮತ್ತಷ್ಟು ಬುದ್ಧಿವಂತರೋ, ಶ್ರೀಮಂತರೋ ಆಗಬಹುದು. ಅದನ್ನು ನಿಮಗೆ ನೀವೇ ಮಾಡಿಕೊಳ್ಳದೇ ಇನ್ಯಾರೂ ನಿಮಗಾಗಿ ಮಾಡಲಾರರು. ಕರೆದರೆ ಗೆಳೆಯರು ಬರಬಹುದು, ಹಣ ಖರ್ಚು ಮಾಡಿದರೆ ಸೌಕರ್ಯಗಳು ಬರಬಹುದು. ಆದರೆ, ಕೆಲವನ್ನು ನೀವೇ ಮಾಡಿಕೊಳ್ಳಬೇಕು. ನಿಮ್ಮ ಹೊಟ್ಟೆಗೆ ನೀವೇ ಊಟ ಮಾಡಬೇಕಾಗಿರುವಂತೆ, ನಿಮ್ಮ ಉನ್ನತಿಯನ್ನು ನೀವೇ ಮಾಡಿಕೊಳ್ಳಬೇಕು. ನಿಮ್ಮ ಬುದ್ಧಿವಂತಿಕೆಯನ್ನು, ದೈಹಿಕ ಶಕ್ತಿಯನ್ನು, ಮಾನಸಿಕ ಎತ್ತರವನ್ನು ನೀವೇ ಗಳಿಸಿಕೊಳ್ಳಬೇಕು.
ಹೊಸ ವರ್ಷ ಅಂಥದೊಂದು ಬಲವಾದ ಅನಿಸಿಕೆಯನ್ನು, ಪ್ರೇರಣೆಯನ್ನು ನಿಮ್ಮಲ್ಲಿ ಮೂಡಿಸಲಿ. ಬರಲಿರುವ ೩೬೫ ದಿನಗಳಲ್ಲಿ ನೀವು ಅಂಥದೊಂದು ಗಟ್ಟಿ ವ್ಯಕ್ತಿತ್ವವನ್ನು ನೀವು ಹೊಂದುವಂತಾಗಲಿ. ಇನ್ನಷ್ಟು ಬೆಳೆಯಿರಿ, ಜೊತೆಗಿರುವವರನ್ನೂ ಬೆಳೆಸಿರಿ. ರೆಂಬೆ-ಕೊಂಬೆಗಳು ಸಮೃದ್ಧಿಯಾದಷ್ಟೂ ಮರ ಬಲಶಾಲಿಯಾಗುವಂತೆ, ನಿಮ್ಮ ಹವ್ಯಾಸಗಳು ಮತ್ತು ಪ್ರಯತ್ನಗಳು ನಿಮ್ಮನ್ನು ಸಮೃದ್ಧ ವ್ಯಕ್ತಿಯನ್ನಾಗಿಸಲಿ.
ಎಲ್ಲರಿಗೂ ಹೊಸವರ್ಷದ ಶುಭಾಶಯಗಳು.
- ಚಾಮರಾಜ ಸವಡಿ
Monday, October 31, 2011
ದುಃಖ ವೈಯಕ್ತಿಕ, ಸುಖ ಸಾರ್ವತ್ರಿಕ
ಮಧ್ಯವಯಸ್ಕನೊಬ್ಬ ನಡುಮನೆಯಲ್ಲಿ ಒಬ್ಬನೇ ಕೂತು ಜೋರಾಗಿ ಅಳುತ್ತಿದ್ದ.
ರಸ್ತೆಯಲ್ಲಿ ಹೋಗುತ್ತಿದ್ದ ಸಾಧುವೊಬ್ಬ ಆ ಅಳುವನ್ನು ಕೇಳಿ ಒಳಗೆ ಬಂದ. ಆ ವ್ಯಕ್ತಿ ಆತನ ಆಗಮನವನ್ನೂ ಗಮನಿಸದ ಪರಿಸ್ಥಿತಿಯಲ್ಲಿ ಇದ್ದುದನಾದ್ದರಿಂದ, ಒಂದೆರಡು ನಿಮಿಷಗಳ ಕಾಲ ಕಾಯ್ದ ಸಾಧು, ತಾನೇ ಪ್ರಶ್ನಿಸಿದ:
"ಏನಪ್ಪಾ ತುಂಬಾ ಸಂತೋಷದಿಂದ ಇರುವಂತೆ ಕಾಣುತ್ತಿದೆ?"
ಆ ವ್ಯಕ್ತಿ ಅಳುತ್ತಲೇ, "ಸಂತೋಷವಾ? ನಾನು ಅಳುತ್ತಿರುವುದು ನಿಮಗೆ ಕಾಣುತ್ತಿಲ್ಲವೆ?"
"ಅಷ್ಟೊಂದು ತಲ್ಲೀನನಾಗಿ ಅಳುತ್ತಿರುವುದನ್ನು ನೋಡಿ, ಅಳುವಿನಿಂದಲೇ ಆನಂದ ಹೊಂದುತ್ತಿರುವೆಯೇನೋ ಎಂದು ಭಾವಿಸಿದೆ. ಒಂದು ವೇಳೆ ಅಳುವಿನಲ್ಲಿ ನಿನಗೆ ಸಂತೋಷ ಸಿಗದಿದ್ದರೆ, ಮತ್ಯಾಕೆ ಅಳುತ್ತಿದ್ದೀ?"
ಆಗ ವ್ಯಕ್ತಿಯ ಅಳು ಕೋಪವಾಗಿ ಬದಲಾಯಿತು. "ಇದ್ಯಾವ ವಿತಂಡವಾದ ಸಾಧು ಮಹಾರಾಜ್. ತೀರಾ ಹತ್ತಿರದವರು ಇಲ್ಲವಾದರೆ ಮನುಷ್ಯರು ಅಳುವುದು ಸಹಜ ತಾನೆ?"
"ಹೌದಾ? ಹತ್ತಿರದವರು ತೀರಿಕೊಂಡರೆ ನೊಂದುಕೊಳ್ಳುವುದು ಮನುಷ್ಯನ ಸಹಜಧರ್ಮ ನಿಜ."
"ಅದನ್ನೇ ನಾನು ಅಳುವಿನ ಮೂಲಕ ವ್ಯಕ್ತಪಡಿಸುತ್ತಿದ್ದೇನೆ."
ಸಾಧು ಮನೆಯ ಆಚೀಚೆ ನೋಡಿ, "ಇಲ್ಲಿ ಯಾರೂ ಇಲ್ಲವಲ್ಲ. ಯಾರಿಗೆ ನಿನ್ನ ದುಃಖವನ್ನು ವ್ಯಕ್ತಪಡಿಸುತ್ತಿದ್ದೀ?"
ಅಳುತ್ತಿದ್ದ ಮಧ್ಯವಯಸ್ಕ ಸುಸ್ತಾದ. "ಸ್ವಾಮೀ, ವಾದದಿಂದ ನನ್ನನ್ನು ಗೊಂದಲಕ್ಕೆ ಈಡು ಮಾಡುತ್ತಿದ್ದೀರಿ. ಅಳುವ ಮೂಲಕ ನನ್ನ ದುಃಖ ಹೊರಹಾಕಿ ಸಮಾಧಾನಿತನಾಗುವುದು ನನ್ನ ಉದ್ದೇಶ."
"ನಾನು ಮನೆಯ ಒಳ ಬಂದಾಗ ನೀನು ಹೇಳಿದ ಮಾತು ಇದೇ ತಾನೆ? ಅಳುವಿನ ಮೂಲಕ ನೀನು ಸಮಾಧಾನ ಹೊಂದುತ್ತಿದ್ದೀಯಾ? ಎಂದೇ ನಾನು ಕೇಳಿದ್ದು. ಆದರೆ, ನಿನ್ನನ್ನು ಸಮಾಧಾನಪಡಿಸಲು ಕೂಡಾ ಇಲ್ಲಿ ಯಾರೂ ಇದ್ದಂತಿಲ್ಲವಲ್ಲ?" ಸಹಾನುಭೂತಿಯಿಂದ ಕೇಳಿದ.
"ಹೌದು, ಸಮಾಧಾನಪಡಿಸಲು ಯಾರೂ ಇಲ್ಲ. ಕಳೆದ ವಾರವಷ್ಟೇ ನನ್ನ ಆಸ್ತಿ ಎಲ್ಲವನ್ನೂ ಕಳೆದುಕೊಂಡು ದಿವಾಳಿಯಾದೆ. ನನ್ನ ಹೆಂಡತಿ ಕೂಡ ಯಾರೊಂದಿಗೋ ಎರಡು ದಿನಗಳ ಹಿಂದೆ ಓಡಿಹೋದಳು. ಇವತ್ತು ನನ್ನ ಮಗ ದೂರ ದೇಶದಲ್ಲಿ, ಅಲ್ಲಿಯದೇ ಹೆಣ್ಣಿನೊಂದಿಗೆ ಮದುವೆಯಾದ. ಇಂಥ ಸಂದರ್ಭಗಳಲ್ಲಿ ಜೊತೆಗಿದ್ದು ಸಮಾಧಾನ ಹೇಳುತ್ತಿದ್ದ ನಮ್ಮ ಹತ್ತಿರದ ಗೆಳೆಯ ಕೂಡ ಈಗ ಕೆಲವೇ ಗಂಟೆಗಳ ಹಿಂದೆ ತೀರಿಕೊಂಡ. ಹೀಗಾಗಿ, ದುಃಖ ತಡೆಯಲಾರದೇ ಅಳುತ್ತಿದ್ದೇನೆ."
"ಅಂದರೆ, ಸಮಾಧಾನಪಡಿಸುವವರು ಬೇಕೆಂದು ತಾನೆ ನಿನ್ನ ಉದ್ದೇಶ?"
"ಹೌದು ಮತ್ತೆ. ನೋವಿನಲ್ಲಿದ್ದಾಗ ಸಮಾಧಾನ ಹೇಳುವ ಮಿತ್ರರು ಬೇಕು ತಾನೆ?"
ಯೋಗಿ ಯೋಚಿಸುತ್ತಾ ಹೇಳಿದ: "ನೀನು ಹೇಳುತ್ತಿರುವುದೇ ನನಗೆ ಅರ್ಥವಾಗುತ್ತಿಲ್ಲ. ಕಷ್ಟ ಬಂದಾಗ ಅಳೋದು ಸಹಜ ಅಂದೆ. ಅದರಿಂದ ಸಮಾಧಾನವಾಗುತ್ತೆ ಅಂದೆ. ಈಗ ನೋಡಿದರೆ, ದುಃಖ ಹೋಗಲಾಡಿಸಲು ಸಮಾಧಾನ ಬೇಕೆನ್ನುತ್ತೀ. ಇಷ್ಟಕ್ಕೂ ನಿನಗೆ ಬೇಕಾಗಿದ್ದೇನು? ನೋವಾ? ದುಃಖವಾ? ಸಮಾಧಾನವಾ?"
"ನೀವು ಬಿಡಿ, ಎಲ್ಲಾ ತೊರೆದ ಸನ್ಯಾಸಿಗಳು. ನಾನೋ ಸಾಮಾನ್ಯ ಮನುಷ್ಯ. ಕಷ್ಟ, ದುಃಖ, ಸಮಾಧಾನ ಇವೆಲ್ಲ ಮಾನವ ಸಹಜ."
"ನಿನ್ನನ್ನು ಸಮಾಧಾನಪಡಿಸಲು ಯಾರೂ ಇಲ್ಲವೆಂದಾದಾಗ, ಎಷ್ಟು ಹೊತ್ತು ದುಃಖಿಸಿದರೆ ನಿನಗೆ ಸಮಾಧಾನವಾಗುತ್ತದೆ? ಒಂದು ವಾರವೆ? ಒಂದು ತಿಂಗಳೆ?"
"ಇದೆಂಥ ಪ್ರಶ್ನೆ ಸ್ವಾಮಿ? ನನಗೆ ಅರ್ಥವಾಗುತ್ತಿಲ್ಲ."
"ಹೋಗಲಿ, ಒಂದು ತಿಂಗಳು ದುಃಖಿಸುತ್ತೀ ಎಂದುಕೊಳ್ಳೋಣ. ಆನಂತರವಾದರೂ ನಿನಗೆ ಸಮಾಧಾನವಾಗುತ್ತದಾ?"
"ದುಃಖವನ್ನು ಕಾಲವೇ ವಾಸಿ ಮಾಡುತ್ತಾರೆ ಅಂತಾರೆ ಬಲ್ಲವರು."
"ಸರಿ, ಎರಡು ತಿಂಗಳು ದುಃಖಿಸುತ್ತೀ ಎಂದುಕೊಳ್ಳೋಣ. ಅಲ್ಲಿಯವರೆಗೆ ಊಟ-ನಿದ್ದೆ ಬಿಟ್ಟು ಅಳುತ್ತಾ ಕೂಡುತ್ತೀಯಾ?"
"ಏನು? ಎರಡು ತಿಂಗಳ ಕಾಲ ಊಟ-ನಿದ್ದೆ ಬಿಟ್ಟು ಅಳೋದಾ? ಜನ ಏನೆಂದುಕೊಳ್ಳುತ್ತಾರೆ? ನೀವು ತಮಾಷೆ ಮಾಡುತ್ತಿಲ್ಲ ತಾನೆ?"
"ಅದು ಬಿಡು, ನಿನಗೆ ಏನು ಇಷ್ಟ? ಸಂಕೋಚವಿಲ್ಲದೆ ಹೇಳು. ನಿನ್ನ ಮನಸ್ಸು ಸರಿಯಾಗಿಲ್ಲದಿರುವಾಗ ಏನು ಮಾಡುತ್ತಿ? ಸುಳ್ಳು ಹೇಳಬಾರದು."
ಆತ ಸಂಕೋಚದಿಂದ ಹೇಳಿದ: "ನನಗೆ ಸಿನಿಮಾ ನೋಡೋದು ಎಂದರೆ ತುಂಬ ಇಷ್ಟ."
"ಮತ್ಯಾಕೆ ಅಳುತ್ತಿದ್ದೀ? ಟಿವಿ ಆನ್ ಮಾಡಿಕೊಂಡು ಸಿನಿಮಾ ನೋಡು, ಆಗ ದುಃಖ ಶಮನವಾಗೇ ಆಗುತ್ತದೆ."
"ಅಯ್ಯೋ ಸ್ವಾಮೀಜಿ, ಇಷ್ಟೆಲ್ಲಾ ತೊಂದರೆಗಳು ಕಣ್ಮುಂದೆ ಇರುವಾಗ, ಈಗ ತಾನೇ ನನ್ನ ಆತ್ಮೀಯ ಗೆಳೆಯ ತೀರಿಕೊಂಡಿರುವಾಗ, ನಾನು ಸಿನಿಮಾ ನೋಡುತ್ತ ಕೂತರೆ ಜನ ಏನೆಂದುಕೊಳ್ಳುತ್ತಾರೆ?"
"ನನಗೆ ಅರ್ಥವಾಗದೇ ಇರೋದೇ ಈ ಅಂಶ. ಅತ್ತರೆ ಸಮಾಧಾನವಾಗುತ್ತದೆ ಅಂತೀಯಾ. ಆದರೆ, ಊಟ-ನಿದ್ದೆ ಬಿಟ್ಟು ಅಳುತ್ತ ಕೂತರೆ ಜನ ಏನೆಂದುಕೊಳ್ಳುತ್ತಾರೆ ಎಂದು ಪ್ರಶ್ನೆ ಹಾಕ್ತೀಯಾ? ನೀನು ಅಳುವುದು ಯಾರಿಗೋಸ್ಕರ? ಜನರ ಸಲುವಾಗಿಯಾ? ಅಥವಾ ನಿನಗೋಸ್ಕರವಾ? ನೀನು ಎಷ್ಟು ಹೊತ್ತು ಅತ್ತರೆ ಜನ ನಿನ್ನನ್ನು ಒಳ್ಳೆಯವನೆಂದು ಗುರುತಿಸುತ್ತಾರೆ?"
"ನೀವು ವಾದ ಮಾಡುತ್ತಿದ್ದೀರಿ ಸ್ವಾಮೀಜಿ. ದುಃಖವಾದಾಗ ಅಳೋದು ಮನುಷ್ಯನ ಸಹಜ ಗುಣ. ಸ್ವಲ್ಪ ಹೊತ್ತಿಗೆ ದುಃಖ ತನಗೆ ತಾನೇ ಕಡಿಮೆಯಾಗುತ್ತದೆ. ಮನಸ್ಸು ಶಾಂತವಾಗುತ್ತದೆ. ಅದಕ್ಕೇ ಅಳೋದು. ನಿಮಗೆ ಅರ್ಥವಾಯಿತು ಅಂದುಕೊಳ್ತೀನಿ", ಆತ ವ್ಯಂಗ್ಯವಾಗಿ ಹೇಳಿದ.
"ನಾನೂ ಇದನ್ನೇ ಹೇಳಲು ಹೊರಟಿದ್ದು. ನೋವು ಕಡಿಮೆ ಮಾಡಿಕೊಳ್ಳಲು ಸಿನಿಮಾ ನೋಡುವುದು ಎಷ್ಟು ನಿರರ್ಥಕವೋ, ಅಳುತ್ತಾ ಕೂಡುವುದೂ ಅಷ್ಟೇ ನಿರರ್ಥಕ. ನೀನು ಗೆಳೆಯನ ಸಾವಿಗಾಗಿ ಅಳುತ್ತಿದ್ದರೆ, ಅದರಿಂದ ಏನೂ ಉಪಯೋಗ ಇಲ್ಲ. ಒಂದಲ್ಲ ಒಂದಿನ ನೀನೂ ಅದೇ ದಾರಿಯಲ್ಲಿ ಹೋಗಬೇಕಾಗುತ್ತದೆ. ಆದರೆ, ನಿನ್ನ ದುಃಖದಿಂದ ನಿನ್ನ ಗೆಳೆಯನಿಗಾಗಲಿ, ಅವನ ಮೇಲೆ ಅವಲಂಬಿತರಾದವರಿಗಾಗಲಿ ಏನೂ ಪ್ರಯೋಜನವಿಲ್ಲ. ನಿನಗೆ ನಿಜಕ್ಕೂ ದುಃಖವಾಗಿದ್ದರೆ, ಗೆಳೆಯನ ಸಾವಿನಿಂದ ತೊಂದರೆಗೊಳಗಾದವರಿಗೆ ಸಹಾಯ ಮಾಡು. ನೀನು ಒಂಟಿಯಾಗಿದ್ದಾಗೆಲ್ಲ ಅವನನ್ನು ನೆನಪಿಸಿಕೋ. ಅದು ನಿಜವಾದ ಪ್ರೇಮ. ಆತ್ಮೀಯರನ್ನು ಪ್ರೀತಿಸು, ಆದರೆ, ದುಃಖಿಸಬೇಡ. ಇದನ್ನೆಲ್ಲ ನೋಡಿದರೆ, ನೀನು ತಾಳಲಾರದಷ್ಟು ಹಿಂಸೆ ಕೊಟ್ಟಿದ್ದರಿಂದಲೇ ನಿನ್ನ ಹೆಂಡತಿ ಓಡಿಹೋದಳೆಂಬುದು ಅರ್ಥವಾಗುತ್ತದೆ."
"ಇಲ್ಲ ಸ್ವಾಮಿ, ನಾನು ಅವಳನ್ನು ತುಂಬ ಚೆನ್ನಾಗಿಯೇ ನೋಡಿಕೊಂಡಿದ್ದೆ. ಆದರೆ, ನನ್ನ ಆಸ್ತಿ ಎಲ್ಲಾ ಹೋಯಿತೆಂದು ಅವಳು ಯಾರೊಂದಿಗೋ ಓಡಿ ಹೋದಳು, ಅಷ್ಟೇ."
"ಹಾಗಾದರೆ, ಅದಕ್ಯಾಕೆ ದುಃಖ ಪಡಬೇಕು. ಅಂಥವಳು ಇರುವುದಕ್ಕಿಂತ ಓಡಿಹೋಗಿದ್ದೇ ಒಳ್ಳೆಯದೆಂದು ನಾಲ್ಕು ಜನರನ್ನು ಕರೆದು ಪಾರ್ಟಿ ಕೊಟ್ಟು ಸಂತೋಷ ಪ್ರಕಟಿಸಬಹುದಲ್ವೆ?"
"ಇದೊಳ್ಳೆ ಕತೆಯಾಯ್ತು. ಸದ್ಯ, ಹೆಂಡತಿ ಓಡಿಹೋದಳೆಂದು ಡಂಗೂರ ಸಾರು ಎಂದು ಹೇಳಲಿಲ್ವಲ್ಲ ನೀವು"
"ಮತ್ತೇನಯ್ಯಾ? ಜನ ಏನೆಂದುಕೊಳ್ಳುತ್ತಾರೋ ಎಂದು ದುಃಖಿಸುವುದು ಅತ್ಯಂತ ಹೇಯವಾದದ್ದು. ಏಕೆಂದರೆ, ದುಃಖ ಯಾವಾಗಲೂ ವೈಯಕ್ತಿಕ. ಸುಖ ಎಂಬುದು ಸಾರ್ವತ್ರಿಕ. ನಿನಗಾಗಿ ಬದುಕುತ್ತೀಯೋ ಜನರಿಗಾಗಿ ಬದುಕುತ್ತೀಯೋ? ನೀನು ಅಷ್ಟೊಂದು ಹೆದರುವ, ಅವರಿಗಾಗಿ ಅಷ್ಟೊಂದು ಅಳುಕಿ ಬದುಕುವ ನಿನ್ನ ಕಷ್ಟದಲ್ಲಿ ಆ ಜನ ನೆರವಾಗಿದ್ದಾರಾ?"
"ಈಗ ನನ್ನನ್ನೇನು ಮಾಡು ಅಂತೀರಿ ತಾವು?"
"ಮೊದಲು ಅಳುವುದನ್ನು ನಿಲ್ಲಿಸು. ಕಳೆದುಹೋದ ಆಸ್ತಿಯನ್ನು ಮತ್ತೆ ಸಂಪಾದಿಸಲು ಪ್ರಯತ್ನ ಶುರು ಮಾಡು. ಸತ್ತುಹೋದ ಮಿತ್ರನ ಅವಲಂಬಿತರಿಗೆ ಸಾಧ್ಯವಾದಷ್ಟೂ ನೆರವಾಗು. ಮತ್ತೆ ಮಗನೊಡನೆ ಒಳ್ಳೆಯ ಸಂಬಂಧ ಇರಿಸಿಕೋ. ಆಗ ನಿನಗೆ ಅಳಲು ಕಾರಣಗಳೇ ಇರುವುದಿಲ್ಲ. ಇದೇ ಬದುಕುವ ದಾರಿ" ಎಂದ ಸಾಧು.
(ಮೂಲ: ಯಂಡಮೂರಿ ವೀರೇಂದ್ರನಾಥ್)
ಪುನರ್ ನಿರೂಪಣೆ: ಚಾಮರಾಜ ಸವಡಿ
Subscribe to:
Posts (Atom)